ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 11
ಶ್ಲೋಕ :
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥೧೧॥
ಅರ್ಥ:
ಆಯಕಟ್ಟಿನ ಎಲ್ಲೆಡೆಗಳಲ್ಲೂ ತಕ್ಕಂತೆ ಹಂಚಿಕೊಂಡು, ಕಾವಲು ನಿಂತು-ನೀವೆಲ್ಲರೂ ಭೀಷ್ಮನನ್ನೇ ಕಾಯುತ್ತಿರಬೇಕು.
ವಿವರ ವಿವರಣೆಗಳು :
“ಆಯಕಟ್ಟಿನ ಎಲ್ಲೆಡೆಗಳಲ್ಲೂ ತಕ್ಕಂತೆ ಹಂಚಿಕೊಂಡು ಕಾವಲು ನಿಂತು ನೀವೆಲ್ಲರೂ ಭೀಷ್ಮರನ್ನು ಕಾಯುತ್ತಿರಬೇಕು” ಎಂದು ದುರ್ಯೋಧನ ದ್ರೋಣರನ್ನುದ್ದೇಶಿಸಿ ಮಾತನಾಡುತ್ತಾನೆ. ಇಲ್ಲಿ “ಸ್ವಲ್ಪ ನಮ್ಮ ಮುದುಕ ಸೇನಾಧಿಪತಿ ಭೀಷ್ಮಾಚಾರ್ಯರನ್ನು ನೋಡಿಕೊಳ್ಳಿ” ಎನ್ನುವಂತಿದೆ ಆತನ ಮಾತು. ಆತನಿಗೆ ತನ್ನ ಸೇನಾಧಿಪತಿಯ ಮೇಲೇ ನಂಬಿಕೆ ಇಲ್ಲ!
ಈ ಮಾತನ್ನು ಕೇಳಿ ಭೀಷ್ಮಾಚಾರ್ಯರಿಗೆ ಅದೆಷ್ಟು ನೋವಾಗಿರಬೇಕು. ತನ್ನ ಆತ್ಮ ಸಾಕ್ಷಿಗೆ ವಿರುದ್ಧವಾಗಿ, ತಾನು ಹುಟ್ಟಿಬಂದ ಮನೆತನದ ರಾಜಾಜ್ಞೆಗೆ ಬದ್ಧನಾಗಿ, ತನ್ನ ಅಂತರಂಗದ ಇಚ್ಛೆಗೆ ವಿರುದ್ಧವಾಗಿ, ತಾನು ಪ್ರೀತಿಸಿದ ತನ್ನ ಮೊಮ್ಮೊಕ್ಕಳ ವಿರುದ್ಧ ಹೋರಾಟಕ್ಕೆ ಪ್ರಾಮಾಣಿಕವಾಗಿ ನಿಂತಾಗ, ಭರವಸೆ ಕಳೆದುಕೊಂಡು ಮಾತನಾಡುತ್ತಿರುವ ದುರ್ಯೋಧನನ ಕುಹಕ ನುಡಿ ಅವರಿಗೆ ಎಷ್ಟೊಂದು ನೋವನ್ನುಂಟುಮಾಡಿರಬಹುದು. ಇದನ್ನು ನಾವು ಊಹಿಸುವುದೂ ಕಷ್ಟ. ಈ ಮಾತನ್ನು ಕೇಳಿಸಿಕೊಂಡ ಭೀಷ್ಮಾಚಾರ್ಯರು ಏನು ಮಾಡಿದರು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.
Comments