ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗಶ್ಲೋಕ - 10

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 10
ಶ್ಲೋಕ :
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥೧೦॥
 
ಅರ್ಥ :
ಭೀಷ್ಮಾಚಾರ್ಯರ ಕಣ್ಗಾಪಿನ ಆ ನಮ್ಮ ಸೇನೆಯ ಸಜ್ಜು ಸಾಲದು. ಭೀಮನ ಕಣ್ ಗಾಪಿನ ಇವರ ಈ ಸೇನೆಯೋ ಸಾಕಷ್ಟು ಸಿದ್ಧಗೊಂಡಿದೆ.
 
ವಿವರ ವಿವರಣೆಗಳು : 
ಇಲ್ಲಿ ದುರ್ಯೋಧನನ ಮಾತಿನ ಪರ್ಯಾವಸಾನ(Conclusion)ವಿದೆ . ಆತ ಹೇಳುತ್ತಾನೆ “ಆ ನಮ್ಮ ಸೈನ್ಯವಿದೆಯಲ್ಲ, ಪಾಂಡವ ಪಕ್ಷಪಾತಿ ಭೀಷ್ಮಾಚಾರ್ಯರ ಮುಂದಾಳತ್ವದಲ್ಲಿನ ಆ ನಮ್ಮ ಸೈನ್ಯ, ಅದು ಭೀಮನ ಕಣ್ಗಾಪಿನ ಈ ಸೈನ್ಯದ ಮುಂದೆ ಸಜ್ಜಾಗಿರುವುದು ಸಾಲದು” ಎಂದು. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ ಭೀಷ್ಮಾಚಾರ್ಯರು ಕೌರವ ಸೇನಾಧಿಪತಿ. ಆದರೆ ಭೀಮ ಪಾಂಡವ ಸೇನಾಧಿಪತಿ ಅಲ್ಲ. ದುರ್ಯೋಧನನಿಗೆ ಭೀಮನ ಮೇಲೆ ದ್ವೇಷವಿದೆ ಹಾಗು ಭಯವಿದೆ. ಆ ಕಾರಣದಿಂದ ಆತ ಭೀಮನ ಕಣ್ಗಾಪಿನ ಪಾಂಡವ ಸೇನೆ ಎಂದು ಸಂಬೋಧಿಸುತ್ತಾನೆ. ಇನ್ನೂ ಸೂಕ್ಷ್ಮವಾಗಿ ನೋಡಿದರೆ- ದುರ್ಯೋಧನ ಯುದ್ಧ ಭೂಮಿಯಲ್ಲಿ ತನ್ನ ಸೇನೆಯ ಮುಂಚೂಣಿಯಲ್ಲಿ ನಿಂತಿದ್ದಾನೆ. ಪಾಂಡವ ಸೇನೆ ಆತನಿಂದ ದೂರದಲ್ಲಿದೆ. ಆದರೆ ಮಾತನಾಡುವಾಗ ಆತ “ಈ ಪಾಂಡವ ಸೇನೆ” ಹಾಗು “ಆ ನಮ್ಮ ಸೇನೆ” ಎಂದು ಸಂಬೋಧಿಸುತ್ತಾನೆ. ಪಾಂಡವ ಸೇನೆ ಈಗಾಗಲೇ ತನ್ನ ಹತ್ತಿರ ಬಂದು ನಿಂತಿದೆ ಹಾಗು ತನ್ನ ಸೇನೆ ತನ್ನಿಂದ ಬಲು ದೂರದಲ್ಲಿದೆ ಎನ್ನುವಂತೆ ಆತ ಮಾತನಾಡುತ್ತಿದ್ದಾನೆ.


Comments