ಭಗವದ್ಗೀತೆ ಅಧ್ಯಾಯ 01 ಶ್ಲೋಕ 06

ಭಗವದ್ಗೀತೆ ಅಧ್ಯಾಯ-1  ಅರ್ಜುನ ವಿಷಾದ ಯೋಗ
ಶ್ಲೋಕ - 06
 
ಶ್ಲೋಕ :
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ ।
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥೬॥
 
ಅರ್ಥ  :
ಯುಧಾಮನ್ಯುವು ಕೆಚ್ಚೆದೆಯವನು. ಉತ್ತಮೌಜ ಕೂಡಾ ಕಡುಗಲಿ. ಸುಭದ್ರೆಯ ಮಗ, ದ್ರೌಪದಿಯ ಮಕ್ಕಳು ಎಲ್ಲರೂ ನಿಶ್ಚಯವಾಗಿ ಹಿರಿಯ ತೇರಾಳುಗಳೆ.
 
ವಿವರ ವಿವರಣೆಗಳು : 
ಪಾಂಡವ ಸೇನೆಯನ್ನು ಕಂಡು ಅಂತರಂಗದಲ್ಲಿ ಗಾಬರಿಗೊಂಡ ದುರ್ಯೋಧನನು, ಒಂದೇ ಮನೆಯಿಂದ ಬಂದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಾನೆ. ಯುಧಾಮನ್ಯು ಹಾಗು ಉತ್ತಮೌಜ ಇವರು ದ್ರುಪದನ ಇನ್ನಿಬ್ಬರು ಮಕ್ಕಳು. ಇವರನ್ನು ದುರ್ಯೋಧನ ವೀರ ನೆಡೆಯುಳ್ಳ ವಿಕ್ರಾಂತರು ಎಂದು ಸಂಬೋಧಿಸುತ್ತಾನೆ. ಇಷ್ಟೇ ಅಲ್ಲ ಆತ ಸುಭದ್ರೆಯ ಮಗ ಅಭಿಮನ್ಯು ಹಾಗು ಇನ್ನೂ ಪ್ರಾಯಪ್ರಭುದ್ದರಲ್ಲದ ಸುಮಾರು ಹದಿಮೂರರಿಂದ ಹದಿನೆಂಟು ಪ್ರಾಯದ ಐದು ಮಂದಿ ದ್ರೌಪದಿಯ ಮಕ್ಕಳನ್ನು ಮಹಾರಥರು ಎಂದು ಸಂಬೋಧಿಸುತ್ತಾನೆ!

ಇಲ್ಲಿ ಸ್ಪಷ್ಟವಾಗಿ ನಾವು ಕಂಡು ಕೊಳ್ಳಬೇಕಾದ ವಿಷಯವೆಂದರೆ, ಒಮ್ಮೆ ನಾವು ಭಯಕ್ಕೊಳಪಟ್ಟರೆ ನಮಗೆ ಹಗ್ಗ ಹಾವಿನಂತೆ ಕಾಣಲಾರಂಭಿಸುತ್ತದೆ. ಇಂತಹ ಸಂಧರ್ಭದಲ್ಲಿ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ ಕೂಡಾ ವ್ಯರ್ಥವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದೂ ಕೂಡ, ಯುದ್ಧಕ್ಕೆ ಮೊದಲು ತನ್ನ ಸೈನ್ಯವನ್ನು ಹುರಿದುಂಬಿಸುವುದನ್ನು ಬಿಟ್ಟು, ದುರ್ಯೋಧನ ಪಾಂಡವ ಸೈನ್ಯದಲ್ಲಿನ ವೀರರ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಆತನ ಮನಃಸ್ಥಿತಿಯನ್ನು ಸೂಚಿಸುತ್ತದೆ. ಆತ ಇಲ್ಲಿ ಹನ್ನೊಂದು ಮಂದಿ ವೀರರ ಹೆಸರನ್ನು ಹೇಳಿರುವುದನ್ನು ನಾವು ಗಮನಿಸಬೇಕು(ಸಾತ್ಯಕಿ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ,ಶೈಭ್ಯ, ಯುಧಾಮನ್ಯು ಹಾಗು ಉತ್ತಮೌಜ). ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಪ್ರತಿನಿಧಿಸುವ ವೀರರಿದ್ದರೂ ಕೂಡ, ಆತನಿಗೆ ಏಳು ಅಕ್ಷೋಹಿಣಿ ಸೈನ್ಯವಿರುವ ಪಾಂಡವ ಸೈನ್ಯದಲ್ಲಿ ಹನ್ನೊಂದು ಮಂದಿ ವೀರರು ಎದ್ದು ಕಾಣಲಾರಂಭಿಸುತ್ತಾರೆ! ಭಗವಂತನನಿಂದ ದೂರ ನಿಂತ ಅಧರ್ಮಿಯಾದ ಪ್ರತಿಯೊಬ್ಬರ ಪಾಡು ಇಷ್ಟೇ. ಅವರು ಎಂದೆಂದೂ ಅಂತರಂಗದ ಭಯದಲ್ಲೇ ಬದುಕುತ್ತಾರೆ ಹಾಗು ಆ ಭಯವನ್ನು ಮುಚ್ಚಿಡಲು ಇಲ್ಲ ಸಲ್ಲದ ಮಾತನ್ನಾಡುತ್ತಾರೆ. ಒಬ್ಬ ದುಷ್ಟ ಕೆಟ್ಟದಾಗಿ ಗೌರವವಿಲ್ಲದೆ ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ. ಅಂತವರಲ್ಲಿ ಎಷ್ಟೇ ಶಕ್ತಿ ಇದ್ದರೂ ಕೂಡಾ ಅದು ಎಂದೂ ಅವರ ರಕ್ಷಣೆ ಮಾಡಲಾರದು. ಏಕೆಂದರೆ ಅವರಿಗೆ ತಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿರುವುದಿಲ್ಲ. ಇದು ಇಲ್ಲಿ ನಾವು ಕಂಡುಕೊಳ್ಳಬೇಕಾದ ಮನಃಶಾಸ್ತ್ರ.

Comments