ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 05
ಶ್ಲೋಕ :
ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ ।
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ ॥೫॥
ಅರ್ಥ:
ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಕೂಡಾ ಕಡುಗಲಿ. ಪುರುಜಿತನು, ಕುಂತಿಭೋಜನು,ಶೈಭ್ಯ ಕೂಡಾ ಗಂಡುಗಲಿ.
ವಿವರ ವಿವರಣೆಗಳು :
ಮೇಲ್ನೋಟಕ್ಕೆ ಈ ಶ್ಲೋಕದಲ್ಲಿ ನಾವು ಆರು ಮಂದಿ ವೀರರ ಹೆಸರನ್ನು ಕಾಣುತ್ತೇವೆ. ಆದರೆ ಇಲ್ಲಿ ನಾವು ನೋಡಬೇಕಾದದ್ದು ಕೇವಲ ಈ ಆರು ವ್ಯಕ್ತಿಗಳನ್ನಲ್ಲ. ಈ ವ್ಯಕ್ತಿಗಳ ಹೆಸರನ್ನು ಹೆಕ್ಕಿ ಹೇಳುತ್ತಿರುವ ದುರ್ಯೋಧನನ ಮನಃಸ್ಥಿತಿಯನ್ನು. ಆತನ ವೇದನೆಯನ್ನು. ಇಲ್ಲಿ ಬರುವ ಒಂದೊಂದು ವ್ಯಕ್ತಿಗಳ ಹಿಂದಿರುವ ಇತಿಹಾಸವನ್ನು ನೋಡಿದಾಗ ಮಾತ್ರ ಇದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊದಲನೆಯದಾಗಿ ಧೃಷ್ಟಕೇತು. ಈತ ಶಿಶುಪಾಲನ ಮಗ. ಶಿಶುಪಾಲನನ್ನು ಕೃಷ್ಣ ರಾಜಸೂಯ ಯಜ್ಞದ ಕಾಲದಲ್ಲಿ ಕೊಂದಿದ್ದ. ಇಂತಹ ಶಿಶುಪಾಲನ ಮಗ ಇಂದು ಪಾಂಡವರ ಪಕ್ಷದಲ್ಲಿ! ಇದು ದುರ್ಯೋಧನನ ಸಂಕಟ. ಚೇಕಿತಾನ: ಈತ ಕೂಡ ಸಾತ್ಯಕಿಯಂತೆ ಒಬ್ಬ ಯಾದವ ವೀರ. ಬಲರಾಮನ ಅನುಪಸ್ಥಿತಿಯಿಂದಾಗಿ ಈತ ಪಾಂಡವರ ಪಾಳಯ ಸೇರಿದ್ದ. ಮುಂದೆ ದುರ್ಯೋಧನ ಕಾಶಿರಾಜನ ಹೆಸರನ್ನು ಹೇಳುತ್ತಾನೆ. ಇಲ್ಲಿ ಕಾಶಿರಾಜ ಎಂದಾಗ ನಮಗೆ ಇಬ್ಬರು ಕಾಶಿರಾಜರು ನೆನಪಿಗೆ ಬರುತ್ತಾರೆ. ಒಂದುಕಡೆ ಸಂಗಮವಾಗಿರುವ ಎರಡು ನದಿಗಳು ಕಾಶಿ ನಗರವನ್ನು ‘ವರಣ’ ಮತ್ತು ‘ಅಸಿ’ ಎನ್ನುವ ಎರಡು ಭಾಗವನ್ನಾಗಿ ವಿಂಗಡಣೆ ಮಾಡಿವೆ. ಅದೇ ಇಂದಿನ ವಾರಣಾಸಿ. ಈ ಎರಡು ಭಾಗದ ರಾಜರನ್ನು ಕಾಶಿರಾಜರೆಂದು ಕರೆಯುತ್ತಾರೆ. ಒಬ್ಬ ದುರ್ಯೋಧನನಿಗೆ ಹೆಣ್ಣುಕೊಟ್ಟ ಮಾವ, ಹಾಗು ಇನ್ನೊಬ್ಬ ಭೀಮಸೇನನಿಗೆ ಕಾಳಿಯನ್ನು ಕೊಟ್ಟು ಮದುವೆ ಮಾಡಿದವ. ಭಾಗಶಃ ಇಲ್ಲಿ ಬರುವ ಕಾಶಿರಾಜ ಭೀಮಸೇನನ ಮಾವ. ಏಕೆಂದರೆ ದುರ್ಯೋಧನನ ಮಾವ ಹಿಂದೆ ಪೌಂಡ್ರಿಕ ಯುದ್ದದಲ್ಲಿ ಕೃಷ್ಣಚಕ್ರದಿಂದ ಹತನಾಗಿದ್ದ. ಇಲ್ಲಿ ನಾವು ಸೂಕ್ಷ್ಮವಾಗಿ ನೋಡಿದಾಗ “ಅಯ್ಯೋ ಕಾಶಿರಾಜನೂ ಕೂಡಾ ಪಾಂಡವರ ಪರವಾಗಿ ಹೋರಾಟ ಮಾಡುತ್ತಿದ್ದಾನೆ. ನನ್ನ ಮಾವನಾದ ಕಾಶಿರಾಜ ಇಂದು ನನ್ನೊಂದಿಗಿಲ್ಲವಲ್ಲ” ಎನ್ನುವ ಕಳವಳ ದುರ್ಯೋಧನನನ್ನು ಕಾಡುತ್ತಿದೆ. ಈ ಮೂವರನ್ನು ದುರ್ಯೋಧನ ‘ವೀರವಾನ್’ ಎಂದು ಕರೆಯುತ್ತಾನೆ. ಇಲ್ಲಿ ವೀರವಾನ್ ಎಂದರೆ ಅಪಾರವಾದ ಶಕ್ತಿ ತುಂಬಿರುವ ಕಡುಗಲಿಗಳು.
ಮುಂದೆ ದುರ್ಯೋಧನ ಪುರುಜಿತ್, ಕುಂತಿಭೋಜ ಹಾಗು ಶೈಭ್ಯನ ಹೆಸರನ್ನು ಹೇಳುತ್ತಾನೆ. ಇಲ್ಲಿ ಪುರುಜಿತ್ ಮತ್ತು ಕುಂತಿಭೋಜ- ಕುಂತಿದೇಶದವರು. ಮೂಲತಃ ಕುಂತಿ ಯಾದವ ವಂಶದವಳು. ವಸುದೇವನ ಸಹೋದರಿ. ಆಕೆಯ ಮೂಲ ಹೆಸರು ‘ಪ್ರಥು’. ಆಕೆಯನ್ನು ಕುಂತಿ ದೇಶದ ರಾಜ ದತ್ತು ಪಡೆದಿದ್ದ. ಈ ದತ್ತು ಸಂಬಂಧದಿಂದಾಗಿ ಪುರುಜಿತ್ ಮತ್ತು ಕುಂತಿಭೋಜ ಪಾಂಡವರ ಪರ ಸೇರಿಕೊಂಡಿದ್ದಾರೆ ಎನ್ನುವುದು ದುರ್ಯೋಧನನ ಅಳಲು. ಇನ್ನು ಶೈಭ್ಯ. ಈತ ಶಿಭಿ ದೇಶದ ರಾಜ. ಈತನ ಮಗ ಕಾಡಿನಲ್ಲಿದ್ದ ದ್ರೌಪದಿಯನ್ನು ಅಪಹರಿಸಲು ಜಯದ್ರತನಿಗೆ ಸಹಾಯ ಮಾಡಿದ್ದಕ್ಕಾಗಿ ಭೀಮಸೇನನಿಂದ ಕೊಲ್ಲಲ್ಪಟ್ಟಿದ. ‘ಹೀಗಿದ್ದೂ ಕೂಡಾ ಶೈಭ್ಯ ಪಾಂಡವರ ಪಕ್ಷವನ್ನು ವಹಿಸಿದ್ದಾನೆ’ ಎಂದು ದುರ್ಯೋಧನ ತನ್ನ ಮನದಾಳದ ಅಳಲನ್ನು ದ್ರೋಣರಲ್ಲಿ ಪರಿತಪಿಸುತ್ತಾನೆ! ಈ ಮೂವರನ್ನು ಆತ ನರಪುಂಗವರು ಎಂದು ಸಂಬೋಧಿಸುತ್ತಾನೆ. ನರಪುಂಗವ ಎಂದರೆ ಗೂಳಿಯಂತೆ ನೆಡಿಗೆಯುಳ್ಳ ಗಂಡುಗಲಿ. ಅವರ ನಡಿಗೆ ಹಾಗು ನೋಟ ವೈರಿಯ ಎದೆ ನಡುಗಿಸಬಲ್ಲುದು.
ಇಲ್ಲಿ ಮಾನಸಿಕ ತುಮುಲಕ್ಕೊಳಪಟ್ಟ ಒಬ್ಬ ವ್ಯಕ್ತಿ , ತನ್ನ ಹಿಂದಿನ ಘಟನೆಗಳನ್ನು ಮೆಲುಕುಹಾಕಿಕೊಂಡು, ಹೇಗೆ ಆತ್ಮಸ್ಥರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ಅದರಿಂದಾಗಿ ಹೇಗೆ ತನ್ನ ನಿಜವಾದ ಸಾಮರ್ಥ್ಯವನ್ನು ಮರೆತು ವರ್ತಿಸುತ್ತಾನೆ ಎನ್ನುವುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಇಂತಹ ಸ್ಥಿತಿಯಲ್ಲಿ ಯಾರೂ ಕೂಡ ಜಯವನ್ನು ಕಾಣಲಾರರು.
Comments